ಗಾಂಧಿ ಜಯಂತಿಗೆ ಇನ್ನು ಕೆಲವೇ ದಿನ, ಖಾದಿ ಖರೀದಿಸಿ ಉದ್ಯಮ ಪುನಶ್ಚೇತನಗೊಳಿಸಿ: ರಾಜಕೀಯ ನಾಯಕರಿಗೆ ಸಚಿವರ ಮನವಿ
ಬೆಂಗಳೂರು: ಭಾರತದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಬೆಸೆದುಕೊಂಡಿರುವ ಖಾದಿ ಬಟ್ಟೆ ಗಾಂಧಿ ಜಯಂತಿ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಮತ್ತೆ ರಾಜಕೀಯ ಪಕ್ಷಗಳ ನಾಯಕರಿಗೆ ಮತ್ತು ಖಾದಿ ಪ್ರಿಯರ ಬೇಡಿಕೆಯ ಉಡುಪಾಗಿದೆ.
ಈ ಸಂದರ್ಭದಲ್ಲಿ ಖಾದಿ ಬಟ್ಟೆಗಳ ಮಾರಾಟವನ್ನು ಹೆಚ್ಚಿಸಲು ಕರ್ನಾಟಕ ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್, ಸಚಿವರು, ಶಾಸಕರು ಹಾಗೂ ಎಲ್ಲಾ ರಾಜಕೀಯ ಮುಖಂಡರಿಗೆ ಖಾದಿ ಗ್ರಾಮೋದ್ಯೋಗ ಮಳಿಗೆಗಳಿಂದ ಖಾದಿ ಬಟ್ಟೆ ಖರೀದಿಸಿ ನೇಯ್ಗೆಗಾರರಿಗೆ ಈ ಸಂಕಷ್ಟ ಸಮಯದಲ್ಲಿ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು ಸಹ ತಮ್ಮ ಕಾರ್ಯಕರ್ತರಿಗೆ ಖಾದಿ ಉಡುಪುಗಳನ್ನು ಖರೀದಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.
ಮಹಾತ್ಮಾ ಗಾಂಧಿಯವರು ಬ್ರಿಟಿಷರ ವಿರುದ್ಧ ಹೋರಾಟದ ಸಂಕೇತವಾಗಿ 1920ರಲ್ಲಿ ಸ್ವದೇಶಿ ಖಾದಿ ಉಡುಪು ತೊಡಲು ಆರಂಭಿಸಿದರು. ನಂತರ ಇದು ಸಾಕಷ್ಟು ಪ್ರಚಾರ ಪಡೆದು ರಾಜಕೀಯ ನಾಯಕರಿಗೆ ಇಷ್ಟದ ಉಡುಪಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರುಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಸಚಿವ ಎಂಟಿಬಿ ನಾಗರಾಜ್, ಅಕ್ಟೋಬರ್ 2 ಗಾಂಧಿ ಜಯಂತಿಯಂದು ಖಾದಿ ಮಳಿಗೆಗಳಿಗೆ ಭೇಟಿ ನೀಡಿ ಖಾದಿ ಬಟ್ಟೆಗಳನ್ನು ಖರೀದಿಸುವಂತೆ ಕೇಳಿಕೊಂಡಿದ್ದಾರೆ. ಈ ಮೂಲಕ ಖಾದಿ ಉದ್ಯಮವನ್ನು ರಾಜ್ಯದಲ್ಲಿ ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದ್ದಾರೆ.
ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಬಲಪಡಿಸಲು ಖಾದಿ ಮತ್ತು ಗ್ರಾಮೋದ್ಯೋಗ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಇತ್ತೀಚೆಗೆ ಉದ್ಯಮದಲ್ಲಿ ಲಾಭ ಕಾಣುತ್ತಿಲ್ಲ, ಕೊರೋನಾ ಲಾಕ್ ಡೌನ್ ಕೂಡ ಹೊಡೆತ ಬಿದ್ದಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೇಯ್ದೆಗಾರರ ಸಂಘಟನೆಗಳಿದ್ದು 20 ಸಾವಿರಕ್ಕೂ ಹೆಚ್ಚು ನೇಯ್ಗೆಗಾರರಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಇವರ ಜೀವನೋಪಾಯಕ್ಕೆ ಸರ್ಕಾರ, ಸಂಘ-ಸಂಸ್ಥೆಗಳು ಮುಂದೆ ಬರಬೇಕಿದೆ.
ವಿಧಾನ ಮಂಡಲ ಕಲಾಪದ ಒಂದು ದಿನವಾದರೂ ಎಲ್ಲಾ ಸದಸ್ಯರು ಖಾದಿ ಉಡುಪುಗಳನ್ನು ಧರಿಸುವಂತೆ ಸೂಚಿಸಬಹುದೇ ಎಂದು ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು ಕೇಳುತ್ತೇನೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಹೇಳಿದ್ದಾರೆ.
2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿಕೊಂಡು ಮುಂದಿನ ತಿಂಗಳು ಅಕ್ಟೋಬರ್ 7ಕ್ಕೆ 20 ವರ್ಷಗಳಾಗುತ್ತಿದ್ದು, ಅವರ ಇಷ್ಟು ವರ್ಷದ ರಾಜಕೀಯ ಅಧಿಕಾರದ ಅಂಗವಾದ ಬಿಜೆಪಿ ಸದಸ್ಯರು ರಾಜ್ಯದಲ್ಲಿ ಖಾದಿ ಅಭಿಯಾನ ಆರಂಭಿಸಿದ್ದಾರೆ. ಬಿಜೆಪಿಯ ಪ್ರತಿ ಕಾರ್ಯಕರ್ತರಿಗೆ ಖಾದಿ ಉಡುಪುಗಳನ್ನು ಧರಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಬಿಜೆಪಿ ಹಿರಿಯ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಖಾದಿಗೆ ಪ್ರಾಮುಖ್ಯತೆ ನೀಡಬೇಕೆಂದು ಕಾಂಗ್ರೆಸ್ ಹಿಂದಿನಿಂದಲೂ ಹೇಳಿಕೊಂಡು ಬಂದಿದೆ. ಹಾಗಾಗಿ ಕಾಂಗ್ರೆಸ್ ಗೆ ಇದು ಹೊಸದಲ್ಲ, ಬಿಜೆಪಿಯವರಿಗೆ ಖಾದಿಯ ಮೌಲ್ಯ ಇದುವರೆಗೆ ಬಹುಶಃ ತಿಳಿದಿರಲಿಕ್ಕಿಲ್ಲ, ಹಾಗಾಗಿ ಇತ್ತೀಚೆಗೆ ಖಾದಿ ಉಡುಪುಗಳನ್ನು ಧರಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.