ಈ ದೇಶದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಪ್ರಕರಣವೂ ವರದಿಯಾಗಿಲ್ಲ!
ಕೊರೊನಾ ಸೋಂಕು ವಿಶ್ವವನ್ನೇ ಆವರಿಸುತ್ತಾ ಎರಡು ವರ್ಷಗಳಾಗಿವೆ. ಆದರೆ ಈ ದೇಶದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಪ್ರಕರಣವೂ ವರದಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಟರ್ಕ್‌ಮೆನಿಸ್ತಾನ್ ದೇಶದಲ್ಲಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಂದೇ ಒಂದು ಕೊರೊನಾ ಸೋಂಕಿತ ಪ್ರಕರಣವೂ ವರದಿಯಾಗಿಲ್ಲ, ಇದು ಮಧ್ಯ ಏಷ್ಯಾದಲ್ಲಿರುವ ಒಂದು ದೇಶವಾಗಿದೆ.
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸಂಗ್ರಹಿಸಿದ ಮಾಹಿತಿ ಪ್ರಕಾರ ಸುಮಾರು 6 ಮಿಲಿಯನ್ ಜನಸಂಖ್ಯೆಯಿರುವ ಒಟ್ಟು ಐದು ದೇಶಗಳಲ್ಲಿ ಕೊರೊನಾ ಸೋಂಕು ಇದುವರೆಗೂ ಪತ್ತೆಯಾಗಿಲ್ಲ.
ಟರ್ಕ್‌ಮೆನಿಸ್ತಾನ್ ಅಧ್ಯಕ್ಷ ಗರ್ಬಂಗೂಲಿ 2006ರಿಂದ ಅಧಿಕಾರದಲ್ಲಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಆದರೆ ಅಲ್ಲಿನ ಕೆಲವು ಸಂಘಟನೆಗಳು, ಕಾರ್ಯಕರ್ತರು ಪತ್ರಕರ್ತರು ಈ ವರದಿ ಸುಳ್ಳು ದೇಶದಲ್ಲೂ ಕೊರೊನಾ ಪ್ರಕರಣಗಳಿವೆ ಎಂದು ಹೇಳಿವೆ.
ಟರ್ಕ್‌ಮೆನಿಸ್ತಾನದ ಸ್ವತಂತ್ರ ಸುದ್ದಿಸಂಸ್ಥೆ ಟರ್ಕ್‌ಮೆನ್ ನ್ಯೂಸ್‌ನ ಸಂಪಾದಕ ರುಸ್ಲಾನ್ ಹೇಳುವ ಪ್ರಕಾರ, ಶಿಕ್ಷಕರು, ಕಲಾವಿದರು ಸೇರಿದಂತೆ ದೇಶದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯ ಏಷ್ಯಾ ರಾಷ್ಟ್ರ ಟರ್ಕ್‌ಮೆನಿಸ್ತಾನದಲ್ಲಿ ಕೊರೊನಾ ವೈರಸ್ ಎಂಬ ಪದವನ್ನು ಅಲ್ಲಿನ ಸರಕಾರ ನಿಷೇಧಿಸಿದ್ದು, ರಾಷ್ಟ್ರದಲ್ಲಿ ಇದುವರೆಗೂ ಒಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ ಎಂದು ಹೇಳಿಕೊಂಡಿದೆ. ಮಾಧ್ಯಮಗಳು ಕೊರೊನಾ ವೈರಸ್ ಪದವನ್ನು ಬಳಸುವಂತಿಲ್ಲ. ಅದಲ್ಲದೇ ಶಾಲೆ, ಆಸ್ಪತ್ರೆಗಳಲ್ಲಿ ವಿತರಿಸುವ ಸರಕಾರದ ಆರೋಗ್ಯ ಬ್ರೋಷರ್‌ಗಳಲ್ಲಿಯೂ ಆ ಪದವನ್ನು ತೆಗೆದು ಹಾಕಲಾಗಿದೆ.
2019ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಟರ್ಕ್‌ಮೆನಿಸ್ತಾನ್ ಕಡೆ ಸ್ಥಾನ ಪಡೆದಿತ್ತು. ಅದಲ್ಲದೇ ವಿಶ್ವದಲ್ಲಿಯೇ ಅತಿ ಹೆಚ್ಚು ನಿರ್ಬಂಧ ವಿಧಿಸಿಕೊಂಡಿರುವ ದೇಶ ಎಂಬ ಕುಖ್ಯಾತಿಗೆ ಈ ರಾಷ್ಟ್ರ ಒಳಗಾಗಿದೆ. ಇರಾನ್‌ನಲ್ಲಿ ಇದುವರೆಗೂ 44,000 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದರೂ ನೆರೆಯ ಟರ್ಕ್‌ಮೆನಿಸ್ತಾನದಲ್ಲಿ ಮಾತ್ರ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಅಲ್ಲಿನ ಸರಕಾರ ಹೇಳಿದೆ.
ಅಲ್ಲಿನ ಸ್ಥಳೀಯ ಮಾಧ್ಯಮದ ವರದಿಗಳ ಪ್ರಕಾರ, ಸಾರ್ವಜನಿಕರು ಕೊರೊನಾ ಬಗ್ಗೆ ಮಾತನಾಡಿದರೆ ಮಫ್ತಿಯಲ್ಲಿರುವ ಪೊಲೀಸರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾರೆ ಎಂದು ಹೇಳಿದೆ.
ಇನ್ನು, ಅಲ್ಲಿನ ನಾಯಕರು ಕೊರೊನಾ ವೈರಸ್ ಬಗೆಗಿನ ಎಲ್ಲ ಮಾಹಿತಿಯನ್ನು ಅಳಿಸಿ ಹಾಕಲು ಎಲ್ಲ ವಿಧದಲ್ಲೂ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅಲ್ಲಿನ ಜನರಿಗೆ ಭದ್ರತೆ ಇಲ್ಲದಂತಾಗುತ್ತದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ವರದಿ ಮಾಡಿದೆ.
ಟರ್ಕ್‌ಮೆನಿಸ್ತಾನದ ಅಧ್ಯಕ್ಷ ಗರ್ಬಂಗೂಲಿ ಬೆರ್ಡಿಮುಖಾಮ್ಮೇಡವ್ ವಿಧಿಸುತ್ತಿರುವ ಅರ್ಥವಿಲ್ಲದ ಆದೇಶಗಳನ್ನು ಪ್ರಶ್ನಿಸಬೇಕು. ಇದರ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಪ್ರತಿಕ್ರಿಯಿಸಬೇಕು.
ಇಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಬೇಕು ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್‌ನ ಪೂರ್ವ ಯುರೋಪ್ ಹಾಗೂ ಮಧ್ಯ ಏಷ್ಯಾ ಡೆಸ್ಕ್‌ನ ಮುಖ್ಯಸ್ಥ ಜೆನ್ನೆ ಕೇವಿಲಿಯರ್ ಆಗ್ರಹಿಸಿದ್ದಾರೆ.