56 ಹೊಸ ಸಿ295 ವಿಮಾನ ಖರೀದಿಗೆ ಒಪ್ಪಂದ
ನವದೆಹಲಿ,ಸೆ.24- ಭಾರತೀಯ ವಾಯು ಪಡೆಗೆ 56 ಹೊಸ ಸಿ295 ಮಧ್ಯಮ ಸಾರಿಗೆ ವಿಮಾನಗಳನ್ನು ಖರೀದಿಸಲು ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್ (ಸ್ಪೇನ್)ನೊಂದಿಗೆ ರಕ್ಷಣಾ ಸಚಿವಾಲಯ ಸುಮಾರು 20 ಸಾವಿರ ಕೋಟಿ ರೂ. ಒಪ್ಪಂದಕ್ಕೆ ಸಹಿ ಮಾಡಿದೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ಖರೀದಿ ಒಪ್ಪಂದವನ್ನು ಎರಡು ವಾರದ ಹಿಂದೆ ಭದ್ರತಾ ಕ್ಯಾಬಿನೆಟ್ ಸಮಿತಿ ಅನುಮೋದಿಸಿತ್ತು. ಒಪ್ಪಂದದ ಪ್ರಕಾರ 38 ತಿಂಗಳಲ್ಲಿ 16 ವಿಮಾನಗಳನ್ನು ಹಾರುವ ಸ್ಥಿತಿಯಲ್ಲಿ ಮತ್ತು 40 ವಿಮಾನಗಳನ್ನು ಮುಂದಿನ 10 ವರ್ಷಗಳಲ್ಲಿ ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್ ಮತ್ತು ಟಾಟಾ ಅಡ್ವಾನ್ಸ್ ಸಿಸ್ಟಮ್ ಲಿಮಿಟೆಡ್ನ ಸಹಭಾಗಿತ್ವದೊಂದಿಗೆ ಭಾರತದಲ್ಲೇ ತಯಾರಿಸಲಾಗುತ್ತದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಸಿ295ಎಂಡಬ್ಲ್ಯೂ ವಿಮಾನವು 5ರಿಂದ 10 ಟನ್ ಹೊರುವ ಸಾಮಥ್ರ್ಯ ಹೊಂದಿದೆ. ಭಾರತದಲ್ಲಿ ಖಾಸಗಿ ಕಂಪೆನಿಯೊಂದು ಮಿಲಿಟರಿ ವಿಮಾನವನ್ನು ಇದೇ ಮೊದಲ ಬಾರಿಗೆ ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಎಲ್ಲಾ 56 ವಿಮಾನಗಳನ್ನು ಸ್ಥಳೀಯ ಎಲೆಕ್ಟ್ರಾನಿಕ್ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಅಳವಡಿಸಲಾಗುವುದು. ಭಾರತದ ಹಳೆಯ ಅವ್ರೂ748 ವಿಮಾನ ಬದಲಿಗೆ ಈ ವಿಮಾನಗಳನ್ನು ಬಳಸಲು ಸೇನೆ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಭಾರತದ ವಾಯು ಸೇನೆಗೆ ಈ ವಿಮಾನಗಳು ಬಲ ತುಂಬಲಿದೆ.