ರಾಜ್ಯ

10 ದಿನದಲ್ಲಿ ಕೆಕೆಆರ್‌ಡಿಬಿ ಬಲವರ್ಧನೆ: ಬೊಮ್ಮಾಯಿ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ (ಕೆಕೆಆರ್‌ಡಿಬಿ) ಖಾಲಿ ಇರುವ ಪ್ರಮುಖ ಹುದ್ದೆಗಳನ್ನು ಹತ್ತು ದಿನಗಳೊಳಗೆ ಭರ್ತಿ ಮಾಡುವ ಮೂಲಕ ಮಂಡಳಿಯ ಬಲವರ್ಧನೆ ಮಾಡ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ಗುರುವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷಗಳ ಸದಸ್ಯರು, ಈ ಭಾಗದ ಸಮಸ್ಯೆಗಳನ್ನು ವಿವರಿಸಿ, ಘೋರ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದ್ದರು.

ಚರ್ಚೆಗೆ ಉತ್ತರ ನೀಡಿದ ಬೊಮ್ಮಾಯಿ, ‘ಕೆಕೆಆರ್‌ಡಿಬಿಗೆ ಕಾಯಂ ಕಾರ್ಯದರ್ಶಿಯನ್ನು ನೇಮಿಸಲಾಗುವುದು. ಮಂಡಳಿಯ ಎಲ್ಲ ಪ್ರಮುಖ ಹುದ್ದೆಗಳು ಹಾಗೂ ಎಂಜಿನಿಯರಿಂಗ್‌ ವಿಭಾಗದಲ್ಲಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕ ಮಾಡಲಾಗುವುದು’ ಎಂದರು.

ಕೋವಿಡ್‌ ಕಾರಣದಿಂದ ಆರ್ಥಿಕ ಸಂಕಷ್ಟ ಉಂಟಾಗಿದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ನಿರ್ಬಂಧಿಸಲಾಗಿತ್ತು. ಈ ನಿರ್ಬಂಧ ತೆರವು ಮಾಡಿ, ತುರ್ತು ಅಗತ್ಯವಿರುವ ಹುದ್ದೆಗಳನ್ನು ಮೊದಲ ಹಂತದಲ್ಲಿ ಮತ್ತು ಇತರ ಖಾಲಿ ಹುದ್ದೆಗಳನ್ನು ಎರಡನೇ ಹಂತದಲ್ಲಿ ಭರ್ತಿ ಮಾಡಲಾಗುವುದು. ವಿಧಾನಸೌಧದಲ್ಲಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕೋಶವನ್ನು ಕಲಬುರ್ಗಿಗೆ ಸ್ಥಳಾಂತರಿಸಲಾಗುವುದು ಎಂದರು.

‘ಖಾಲಿ ಇರುವ 6,779 ಶಿಕ್ಷಕರ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ. 14,809 ಹುದ್ದೆಗಳನ್ನು ನೇರ ನೇಮಕಾತಿಯಡಿ ತುಂಬಲಾಗುವುದು’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ತನಿಖೆಯ ಭರವಸೆ: ‘ಕೆಕೆಆರ್‌ಡಿಬಿಗೆ ಕೊಟ್ಟ ಅನುದಾನದ ‍ಪೈಕಿ, ₹100 ಕೋಟಿಯನ್ನು ಕಲ್ಯಾಣ ಕರ್ನಾಟಕ ಮಾನವ ಕೃಷಿ ಅಭಿವೃದ್ಧಿ ಸಂಘಕ್ಕೆ ಕೊಡಲಾಗಿದೆ. ಈ ಅನುದಾನ ದುರ್ಬಳಕೆಯಾಗಿದೆ’ ಎಂಬ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

‘ಈ ಸಂಸ್ಥೆಯ ಬಗ್ಗೆಯೂ ತನಿಖೆ ನಡೆಸಿ, ತಪ್ಪು ಮಾಡಿದ್ದರೆ ಕ್ರಮ ಜರುಗಿಸುತ್ತೇವೆ’ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button