ದೇಶ

ಸುಪ್ರೀಂ ತೀರ್ಪಿನ ನಂತರ, ಅವಿವಾಹಿತ ಮಹಿಳೆಯರಿಗೆ ಎನ್ ಡಿಎ, ನೌಕಾ ಅಕಾಡೆಮಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ ಯುಪಿಎಸ್ ಸಿ

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ ಡಿಎ)ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಿವಾಹಿತ ಮಹಿಳೆಯರಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಅನುಮತಿ ನೀಡಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ಅನುಸಾರವಾಗಿ, ಯುಪಿಎಸ್ ಸಿ ಪರೀಕ್ಷೆಗಾಗಿ upsconline.nic.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿರ್ಧರಿಸಿದೆ. ರಾಷ್ಟ್ರೀಯತೆ, ವಯಸ್ಸು, ಶೈಕ್ಷಣಿಕ ಅರ್ಹತೆ ಇತ್ಯಾದಿಗಳ ವಿಷಯದಲ್ಲಿ ಅರ್ಹರಾಗಿರುವ “ಅವಿವಾಹಿತ ಮಹಿಳಾ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದು” ಎಂದು ಪ್ರಕಟಣೆ ತಿಳಿಸಿದೆ.

ದೈಹಿಕ ಮಾನದಂಡಗಳು ಮತ್ತು ಮಹಿಳಾ ಅಭ್ಯರ್ಥಿಗಳ ಖಾಲಿ ಹುದ್ದೆಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯದಿಂದ ಮಾಹಿತಿ ಪಡೆದ ನಂತರ ತಿಳಿಸಲಾಗುವುದು ಎಂದು ಯುಪಿಎಸ್ ಸಿ ಹೇಳಿದೆ.

ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 8 ರವರೆಗೆ(ಸಂಜೆ 6 ಗಂಟೆಯವರೆಗೆ) ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ನಿಗದಿತ ಕೊನೆಯ ದಿನಾಂಕ/ಸಮಯವನ್ನು ಮೀರಿದ ನಂತರ ಸಲ್ಲಿಸುವ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ಮೇಲೆ ಹೇಳಿದ ಆನ್‌ಲೈನ್ ಮೋಡ್ ಹೊರತುಪಡಿಸಿ ಇತರೆ ಯಾವುದೇ ವಿಧಾನದ ಮೂಲಕ ಅರ್ಜಿ ಸ್ವೀಕರಿಸಲಾಗುವುದಿಲ್ಲ.

“ಈ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಯನ್ನು ನವೆಂಬರ್ 14 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 18 ರಂದು ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್, ನೀತಿ ನಿರ್ಧಾರದ ಆಧಾರದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳುವ ಸೇನೆಯ ಕ್ರಮ ಲಿಂಗ ತಾರತಮ್ಯವನ್ನು ತೋರಿಸುತ್ತದೆ ಎಂದು ಛೀಮಾರಿ ಹಾಕಿತ್ತು.

Related Articles

Leave a Reply

Your email address will not be published. Required fields are marked *

Back to top button