ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿಲ್ಲ; ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಕಣ್ಣೀರಿಟ್ಟ ತಂದೆ
ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಮಾದಪ್ಪ ಆತ್ಮಹತ್ಯೆ ಪ್ರಕರಣದ ಹಿಂದೆ ನೂರಾರು ಅನುಮಾನಗಳು ಮೂಡುತ್ತಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂಬ ಶಂಕೆ ಆರಂಭವಾಗಿದೆ. ಈ ನಡುವೆ ಮಗಳ ಸಾವಿನ ಬಗ್ಗೆ ಸೌಜನ್ಯ ತಂದೆ ನೀಡಿರುವ ಹೇಳಿಕೆ ಈ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಸೌಜನ್ಯ ತಂದೆ ಪ್ರಭು, ನನ್ನ ಮಗಳು ಸಾಯುವಂತಹ ಹುಡುಗಿಯಲ್ಲ. ಆಕೆಗೆ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ಬಳಿ ಕೂಡ ತನಗೆ ಆರೋಗ್ಯ ಸಮಸ್ಯೆಯಾಗಲಿ ಅಥವಾ ಬೇರೆ ಸಮಸ್ಯೆಯಿರುವ ಬಗ್ಗೆಯೂ ಹೇಳಿಲ್ಲ. ಊರಿಗೆ ಬರುತ್ತಿದ್ದೇನೆ ಎಂದು ಹೇಳಿದವರು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವುದು ನಂಬಲು ಸಾಧ್ಯವಿಲ್ಲ. ಮಗಳ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ ಆಕೆಯ ಮೊಬೈಲ್ ಫೋನ್ ಸಿಕ್ಕರೆ ಸತ್ಯಾಂಶ ಬಯಲಾಗಲಿದೆ ಎಂದು ಹೇಳಿದ್ದಾರೆ.
ನನ್ನ ಮಗಳು ನೇಣು ಬಿಗಿದುಕೊಂಡಿರುವ ಸಾಧ್ಯತೆ ಕಡಿಮೆಯಿದೆ. ಆಕೆ ಶವ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಇರಲಿಲ್ಲ. ಮಹೇಶ್ ಮೃತ ಸೌಜನ್ಯ ಪಿಎ ಎಂದು ಹೇಳಲಾಗುತ್ತಿದೆ. ಮಹೇಶ್ ಒಬ್ಬನೇ ಮೃತದೇಹವನ್ನು ಇಳಿಸಿದ್ದಾನೆ. ಪೊಲೀಸರನ್ನು ಕರೆಸದೆ ಮೃತದೇಹ ಇಳಿಸಿರುವುದು ಕೂಡ ಅನುಮಾನ ಮೂಡಿಸುತ್ತಿದೆ. ಮಹೇಶ್ ಹಾಗೂ ವಿವೇಕ್ ವಿರುದ್ಧ ದೂರು ನೀಡಿದ್ದೇನೆ. ಮಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ.