ಮುಂಬೈ: 7 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ, ಮಹಿಳೆ ಸಾವು
ಮುಂಬೈ: ಮುಂಬೈನ ಖಾರ್-ಪಶ್ಚಿಮ ಉಪನಗರದಲ್ಲಿರುವ ಏಳು ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಗುರುವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ 40 ವರ್ಷ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಒಬ್ಬ ಬಾಲಕಿ ಮತ್ತು ಮತ್ತೊಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ.
ಮೃತ ಮಹಿಳೆಯನ್ನು ಹೇಮಾ ಜಗ್ವಾನಿ ಎಂದು ಗುರುತಿಸಲಾಗಿದೆ. ಕಟ್ಟಡದೊಳಗೆ ಸಿಲುಕಿದ್ದ 10 ವರ್ಷದ ಬಾಲಕಿ ಮತ್ತು 45 ವರ್ಷದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಸಂಜೆ 7 ಗಂಟೆ ವೇಳೆಗೆ ‘ನೂತನ್ ವಿಲ್ಲಾ’ ಕಟ್ಟಡಗಳ ಸಮುಚ್ಛಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಎಂಟು ಅಗ್ನಿಶಾಮಕ ಯಂತ್ರಗಳು, ಏಳು ನೀರಿನ ಟ್ಯಾಂಕರ್ ಮತ್ತು ಇತರೆ ಸಾಧನಗಳನ್ನು ಬಳಸಿ ರಾತ್ರಿ ಸುಮಾರು11 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ, ಕೊಠಡಿಯಲ್ಲಿ ಸಿಕ್ಕಿಕೊಂಡಿದ್ದ ಹೇಮಾ ಜಗ್ವಾನಿ ಉಸಿರುಗಟ್ಟಿ ಅಲ್ಲೇ ಕುಸಿದಿದ್ದರು. ನಂತರ ಅವರನ್ನು ಹಿಂದೂಜಾ ಆಸ್ಪತ್ರೆಗೆ ಕರೆತರಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಕಟ್ಟಡದ ವಿದ್ಯುತ್ ವೈರಿಂಗ್ ಹಾದುಹೋಗುವ ಕೊಳವೆಯಲ್ಲಿ ಬೆಂಕಿಯ ಜ್ವಾಲೆಗಳು ಹರಡಿವೆ. ಕಟ್ಟಡದ ತುಂಬಾ ಹೊಗೆ ತುಂಬಿಕೊಂಡಿದ್ದ ಕಾರಣ, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯ ವೇಳೆ ಕೃತಕ ಉಸಿರಾಟದ ಉಪಕರಣಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದರು.