ಟಾಲಿವುಡ್ ಕಡೆ ಮುಖ ಮಾಡಿದ ‘ದಿಯಾ’ ಖ್ಯಾತಿಯ ನಟಿ ಖುಷಿ ರವಿ
ದಿಯಾ ಸಿನಿಮಾ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಹೃದಯ ಗೆದ್ದಿರುವ ನಟಿ ಖುಷಿ ಇದೀಗ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ದಿಯಾ ಚಿತ್ರದಲ್ಲಿ ಅದ್ಭುತ ನಟನೆ ಮೂಲಕ ಕನ್ನಡ ಅಭಿಮಾನಿಗಳ ಮನ ಗೆದ್ದಿರುವ ಖುಷಿ ಇದೀಗ ಪರಭಾಷೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಕನ್ನಡದಲ್ಲಿ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಬೇರೆ ಬೇರೆ ಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಕನ್ನಡದ ಅನೇಕ ನಟಿಯರು ಇದೀಗ ಪರಭಾಷೆಯಲ್ಲಿ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದಾರೆ. ಇದೀಗ ಅದೇ ಸಾಲಿಗೆ ನಟಿ ಖುಷಿ ರವಿ ಕೂಡ ಸೇರಿಕೊಂಡಿದ್ದಾರೆ. ದಿಯಾ ಸಿನಿಮಾ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಹೀಗಾಗಿ ನಟಿ ಖುಷಿ ರವಿ ಪರಭಾಷೆಯ ಪ್ರೇಕ್ಷಕ ಹೃದಯ ಗೆದ್ದಿದ್ದರು. ದಿಯಾ ಸಕ್ಸಸ್ ಇದೀಗ ತೆಲುಗು ಸಿನಿಮಾರಂಗಕ್ಕೆ ಎಂಟ್ರಿಕೊಡುವಂತೆ ಮಾಡಿದೆ.
ಅಂದಹಾಗೆ ಖುಷಿ ತೆಲುಗಿನ ಖ್ಯಾತ ನಟ ಸಂದೀಪ್ ಕಿಶನ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಖುಷಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಚಿತ್ರಕ್ಕೆ ಸದ್ಯ SK28 ಎಂದು ನಾಮಕರಣ ಮಾಡಲಾಗಿದೆ. ಖುಷಿ ರವಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ” ಹೊಸ ಸಿಟಿ, ಹೊಸ ಭಾಷೆ, ಹೊಸ ಆರಂಭ. ಆದರೆ ನಿಮ್ಮೆಲ್ಲರಿಂದ ಪ್ರೀತಿ ಬಯಸುತ್ತೇನೆ” ಎಂದು ಖುಷಿ ರವಿ ಬರೆದುಕೊಂಡಿದ್ದಾರೆ.
ಇತ್ತೀಚಿಗಷ್ಟೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಹೈದರಾಬಾದ್ ನಲ್ಲಿ ಸಮಾರಂಭ ಮಾಡಲಾಗಿದೆ. ಇನ್ನು ವಿಶೇಷ ಎಂದರೇ ಸಿನಿಮಾದಲ್ಲಿ ಏಕ್ ಮಿನಿ ಕಥಾ ಸಿನಿಮಾ ಖ್ಯಾತಿಯ ಕಾವ್ಯಾ ಮತ್ತೋರ್ವ ಮಹಿಳಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ವಿ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಹಾಸ್ಯ ಮೂವೀಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಅಂದಹಾಗೆ ಖುಷಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ ದಿಯಾ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ಡಬ್ ಮಾಡಲಾಗಿದೆ. ಇದೀಗ ಖುಷಿ ತೆಲುಗು ಸಿನಿಮಾ ಮೂಲಕವೇ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದ್ದಾರೆ. ದಿಯಾ ಸಿನಿಮಾ ಬಳಿಕ ಖುಷಿ ನಕ್ಷೆ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಳಿಕ ತೆಲುಗು ಕಡೆ ಹೊರಟಿದ್ದಾರೆ. ಈಗಾಗಲೇ ಕನ್ನಡದ ಅನೇಕ ನಟಿಯರು ತೆಲುಗಿನಲ್ಲಿ ಒಂದು ಹವಾ ಕ್ರಿಯೇಟ್ ಮಾಡಿದ್ದಾರೆ. ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅದೇ ಸಾಲಿಗೆ ಖುಷಿ ಕೂಡ ಸೇರುತ್ತಾರಾ ಎಂದು ಕಾದು ನೋಡಬೇಕು.