ಆರೋಗ್ಯ

ಕೊರೊನಾ ತೀವ್ರತರ ರೋಗಿಗಳಿಗೆ ಪ್ರತಿಕಾಯ ಚಿಕಿತ್ಸೆ ನೀಡಲು WHO ಶಿಫಾರಸು

ನವದೆಹಲಿ, ಸೆಪ್ಟೆಂಬರ್ 24: ಕೊರೊನಾ ತೀವ್ರತೆ ಹೆಚ್ಚಿರುವ ರೋಗಿಗಳಿಗೆ ಅಥವಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇರುವವರಿಗೆ ಎರಡು ಪ್ರತಿಕಾಯ ಸಂಯೋಜನೆಯ ಚಿಕಿತ್ಸೆ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಈಚೆಗಿನ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

ಕೊರೊನಾ ರೋಗಿಗಳ ಎರಡು ನಿರ್ದಿಷ್ಟ ಗುಂಪುಗಳಿಗೆ ಕ್ಯಾಸಿರಿವಿಮಾಬ್ ಹಾಗೂ ಇಂಡೆವಿಮಾಬ್ ಪ್ರತಿಕಾಯಗಳನ್ನು ಸಂಯೋಜಿಸುವ ಚಿಕಿತ್ಸೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅಭಿವೃದ್ಧಿ ಸಮಿತಿ ಶಿಫಾರಸು ಮಾಡಿದೆ.

ಉನ್ನತ ಪರಿಶೀಲನೆಗೆ ಒಳಗಾಗದ ಮೂರು ಪ್ರಯೋಗಗಳ ಪುರಾವೆಗಳನ್ನು ಆಧರಿಸಿ ಮೊದಲ ಶಿಫಾರಸು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಕ್ಯಾಸಿರಿವಿಮಾಬ್ ಹಾಗೂ ಇಂಡಿವಿಮಾಬ್ ಚಿಕಿತ್ಸೆ ಮೂಲಕ ತಗ್ಗಿಸಬಹುದು. ಅಷ್ಟೆ ಅಲ್ಲ, ಲಸಿಕೆ ಹಾಕಿಸಿಕೊಳ್ಳದ, ವಯಸ್ಸಾದ ಅಥವಾ ರೋಗನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಇದು ಉತ್ತಮ ಚಿಕಿತ್ಸೆ ಎಂದು ತಿಳಿಸಿದೆ.

ತೀವ್ರ ಅಪಾಯದಲ್ಲಿರುವ ರೋಗಿಗಳಲ್ಲಿ ರೋಗಲಕ್ಷಣಗಳ ಅವಧಿಯನ್ನು ಕೂಡ ತಗ್ಗಿಸಬಹುದು ಎಂದು ಪ್ರಯೋಗದಲ್ಲಿ ತಿಳಿಸಿದೆ.

ಮತ್ತೊಂದು ಶಿಫಾರಸು ಕೂಡ ಒಂದು ಪ್ರಯೋಗದ ಮೇಲೆ ಅವಲಂಬಿತವಾಗಿದ್ದು, ಇದರಲ್ಲಿ ಎರಡು ಪ್ರತಿಕಾಯಗಳ ಸಂಯೋಜನೆ ಮರಣ ಸಾಧ್ಯತೆ ಕಡಿಮೆಗೊಳಿಸುವ ಹಾಗೂ ಸೆರೋನೆಗೆಟಿವ್ ರೋಗಿಗಳಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಅವಲಂಬನೆಯನ್ನು ತಗ್ಗಿಸುತ್ತದೆ ಎಂದು ಹೇಳಿದೆ.

ಈ ಅಧ್ಯಯನವು ಕ್ಯಾಸಿರಿವಿಮಾಬ್ ಹಾಗೂ ಇಂಡಿವಿಮಾಬ್‌ನ ಚಿಕಿತ್ಸೆಯು ತೀವ್ರ ಸೋಂಕಿತರಲ್ಲಿ ಸಾವಿರದಲ್ಲಿ 49 ಮಂದಿ ಸಾವನ್ನಪ್ಪುವ ಹಾಗೂ ತೀವ್ರ ಅಸ್ವಸ್ಥರಲ್ಲಿ 87 ಮಂದಿ ಸಾವನ್ನಪ್ಪುವ ಸಾಧ್ಯತೆಯನ್ನು ತಿಳಿಸಿದೆ.

ಇತರೆ ಕೊರೊನಾ ರೋಗಿಗಳಿಗೆ ಈ ಪ್ರತಿಕಾಯ ಚಿಕಿತ್ಸೆಯು ಅಂಥ ಅರ್ಥಪೂರ್ಣ ಪ್ರಯೋಜನ ನೀಡುವುದು ಅಸಂಭವ ಎಂದು ಸಮಿತಿ ಹೇಳಿದೆ.

ಕ್ಯಾಸಿರಿವಿಮಾಬ್ ಹಾಗೂ ಇಂಡಿವಿಮಾಬ್‌ ಮೋನೊಕ್ಲೋನಲ್ ಪ್ರತಿಕಾಯಗಳಾಗಿದ್ದು, ಇವನ್ನು ಒಟ್ಟಿಗೆ ಬಳಸಿದರೆ ಕೊರೊನಾ ಸೋಂಕಿನ ಸ್ಪೈಕ್ ಪ್ರೊಟೀನ್‌ಗೆ ಉತ್ತೇಜನ ನೀಡಿ, ಜೀವಕೋಶಗಳಿಗೆ ಸೋಂಕು ತಗುಲುವ ವೈರಸ್ ಸಾಮರ್ಥ್ಯವನ್ನು ತಟಸ್ಥಗೊಳಿಸುತ್ತದೆ ಎನ್ನಲಾಗಿದೆ. ಈ ಸ್ಪೈಕ್ ಪ್ರೊಟೀನ್, ವೈರಸ್‌ಗೆ ತಡೆ ನೀಡುವ ಮೂಲಕ ಮಾನವ ಜೀವಕೋಶಗಳಿಗೆ ಸೋಂಕು ತಗುಲುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಇದೀಗ ಇವೆರ್ಮೆಕ್ಟಿನ್ ಹಾಗೂ ಹೈಡ್ರೋಆಕ್ಸಿಕ್ಲೋರೋಕ್ವಿನ್ ಅನ್ನು ಕೊರೊನಾ ರೋಗಿಗಳಿಗೆ ಬಳಸದಂತೆ ತಿಳಿಸಿದೆ.

ಎಷ್ಟೋ ದೇಶಗಳಲ್ಲಿ ಕೊರೊನಾ ಸೋಂಕಿನ ಮೊದಲ ಡೋಸ್ ನೀಡುವುದು ಕಷ್ಟಕರವಾಗಿರುವಾಗ ಶ್ರೀಮಂತ ದೇಶಗಳು ಮೂರನೇ ಡೋಸ್ ನೀಡುತ್ತಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಕಡಿಮೆ ಆದಾಯದ ದೇಶಗಳಲ್ಲಿ ಮೊದಲ ಡೋಸ್ ಲಸಿಕೆ ಪೂರೈಕೆ ಮಾಡುವ ಮೂಲಕ ನೆರವಾಗಿ. ಇದಕ್ಕಾಗಿ ಮೂರನೇ ಡೋಸ್ ನೀಡಲು ತಾತ್ಕಾಲಿಕ ತಡೆ ನೀಡಿ ಎಂದು ಹೇಳಿದೆ.

ಬೂಸ್ಟರ್ ಡೋಸ್ ಅಗತ್ಯದ ಕುರಿತು ಚರ್ಚೆ: ಕೊರೊನಾ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆ ರೂಪಾಂತರ ವೈರಸ್ ವಿರುದ್ಧ ಪ್ರಸ್ತುತ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಇಸ್ರೇಲ್ ಈ ಬೂಸ್ಟರ್ ಡೋಸ್ ವಿತರಣೆ ಶುರು ಮಾಡಿದೆ. ಬೂಸ್ಟರ್ ಡೋಸ್ ಲಸಿಕೆ ವಿತರಣೆ ಬಗ್ಗೆ ಫೈಜರ್ ಕಂಪನಿ ಜೊತೆಗೆ ಅಮೆರಿಕ ಚರ್ಚೆ ನಡೆಸುತ್ತಿದೆ. ಭಾರತದಲ್ಲಿಯೂ ಈ ಕುರಿತು ಚರ್ಚೆಗಳು ಆರಂಭವಾಗಿವೆ. ಕಾಲಕ್ರಮೇಣ ಲಸಿಕೆ ಪ್ರತಿಕಾಯ ಮಟ್ಟ ಕ್ಷೀಣಿಸುವುದರಿಂದ ಬೂಸ್ಟರ್ ಡೋಸ್ ಅಗತ್ಯ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ತೀವ್ರತರವಲ್ಲದ, ಆದರೆ ಆಸ್ಪತ್ರೆಗೆ ದಾಖಲಾಗಬೇಕಾದ ಕೊರೊನಾ ರೋಗಿಗಳು ಮೊದಲ ಗುಂಪಾದರೆ, ತೀವ್ರತರ ಕೊರೊನಾ ಸೋಂಕಿಗೆ ತುತ್ತಾಗಿರುವ, ಸೆರೋ ನೆಗೆಟಿವ್ ಆಗಿರುವ, ಅಂದರೆ, ದೇಹದಲ್ಲಿ ಕೊರೊನಾ ಸೋಂಕಿಗೆ ಪ್ರತಿಕಾಯ ಉತ್ಪಾದನೆ ಆಗದ ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲು ಶಿಫಾರಸು ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button