ಹುಬ್ಬಳ್ಳಿ: ಪಾಪ ಯಡಿಯೂರಪ್ಪ (BS Yediyurappa) ದುಡ್ಡು ಖರ್ಚು ಮಾಡಿ ಬಿಜೆಪಿನ ಅಧಿಕಾರಕ್ಕೆ ತಂದ್ರೆ ಇವರು ರಾತೋರಾತ್ರಿ ಅವರನ್ನು ಕಿತ್ತೊಗೆದರು. ಪಾಪ.. ರಾಜಕೀಯ ಸಂಧ್ಯಾಕಾಲದಲ್ಲಿ ಯಡಿಯೂರಪ್ಪನ ಅಳುವ ಹಾಗೆ ಮಾಡಿಬಿಟ್ಟರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮರುಕಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ಉಪ ಚುನಾವಣಾ (Hangal ByElection) ಪ್ರಚಾರದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಬೇಕು ಅಂತ ಯಡಿಯೂರಪ್ಪ ಹಣ ಖರ್ಚು ಮಾಡಿ ಆಪರೇಷನ್ ಕಮಲ (Operation Lotus)ಮಾಡಿದರು.
ಶಾಸಕರಿಗೆ ಹಣ ಕೊಟ್ಟು ಅಧಿಕಾರಕ್ಕೆ ಬಂದರು. ಆದರೆ ಇವ್ರು ರಾತ್ರೋ ರಾತ್ರಿ ಅವರನ್ನ ಮನೆಗೆ ಕಳಿಸಿದರು. ಯಡಿಯೂರಪ್ಪ ಕಣ್ಣೀರು ಹಾಕುತ್ತಾ ಗೋಳೋ ಅಂತ ಅಳುತ್ತಾ ರಾಜಿನಾಮೆ ಕೊಟ್ಟು ಹೋದರು. ಯಡಿಯೂರಪ್ಪ ಅವರಿಗೆ ಅಂಥ ಪರಿಸ್ಥಿತಿ ಬಂತು. ರಾಜಕೀಯ ಸಂಧ್ಯಾಕಾಲದಲ್ಲಿ ಯಡಿಯೂರಪ್ಪನ ಅಳೋ ಹಾಗೆ ಮಾಡಿಬಿಟ್ಟರು ಎಂದು ಮರುಕಪಟ್ಟ ಸಿದ್ದರಾಮಯ್ಯ, ಬಿಜೆಪಿಯವರಿಗೆ ಏನಾದ್ರೂ ಮಾನ ಮರ್ಯಾದೆ ಇದೆಯೇನ್ರೀ ಎಂದು ಪ್ರಶ್ನಿಸಿದರು. ಹಾಗಂತ ಯಡಿಯೂರಪ್ಪ ಮಾಡಿದ್ದೆಲ್ಲವೂ ಸರಿ ಇತ್ತು ಅಂತ ಹೇಳಲ್ಲ. ಅವರ ಕಾಲದಲ್ಲಿಯೂ ಭಾರೀ ಅನಾಹುತಗಳಾಗುವ ಎಂದರು.
ಬಿಜೆಪಿ ಬಡವರ, ಯುವಕರ, ಮಹಿಳೆ, ಕಾರ್ಮಿಕರ, ಅಲ್ಪಸಂಖ್ಯಾತರ ಪರ ಇಲ್ಲ. ಬಿಜೆಪಿಯವರು ಎಂದೂ ಶಿವರಾಜ್ ಸಜ್ಜನ್ ಹೆಸರು ಹೇಳಿ ಮತ ಕೇಳುತ್ತಿಲ್ಲ. ದುರ್ಜನನ ಹೆಸರು ಹೇಳಿದ್ರೆ ಮತ ಹಾಕೊಲ್ಲ ಅಂತ ಗೊತ್ತು. ಹೀಗಾಗಿ ಪ್ರಧಾನಿ ಮೋದಿ, ಯಡಿಯೂರಪ್ಪ ಮೊದಲಾದವರ ಹೆಸರು ಹೇಳಿ ಮತ ಕೇಳ್ತಿದಾರೆ ಎಂದರು.