ಹೊಸ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ
ಬೆಂಗಳೂರು, ಸೆಪ್ಟೆಂಬರ್ 23: ಯಶವಂತಪುರ ರೈಲ್ವೆ ನಿಲ್ದಾಣ ಹೊಸ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದೆ.
ಒಟ್ಟು 12 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ಆಟೋ, ಕ್ಯಾಬ್ ನಿಲ್ದಾಣಗಳು ಸೇರಿದಂತೆ ಪಾರ್ಕಿಂಗ್ ಪ್ರದೇಶವನ್ನು ಅಗಲ ರಸ್ತೆಗಳೊಂದಿಗೆ ಉನ್ನತೀಕರಿಸಲಾಗಿದೆ.
ಏರ್ ಪೋರ್ಟ್‌ನಂತೆ ಬದಲಾಗಲಿದೆ ಯಶವಂತಪುರ ರೈಲ್ವೆ ನಿಲ್ದಾಣ
ಮೊದಲ ಹಂತದಲ್ಲಿ ರೈಲ್ವೆ ನಿಲ್ದಾಣವನ್ನು 12 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ನಿಲ್ದಾಣದ ಪ್ರವೇಶದ್ವಾರ (ಫ್ಲಾಟ್ ಫಾರಂ ನಂ 6) ಬಳಿ ವಿಮಾನ ನಿಲ್ದಾಣ ಮಾದರಿಯ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿತ್ತು. ಯಶವಂತಪುರ ಮಾರುಕಟ್ಟೆ ಕಡೆಯಿಂದ ನಿಲ್ದಾಣಕ್ಕೆ ಆಗಮಿಸುವುದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈಗ ಮೆಟ್ರೋ ಸೇವೆಯೂ ಇರುವುದರಿಂದ ಹೊಸ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗಿದೆ.
ನಮ್ಮ ಮೆಟ್ರೋ, ಬೆಂಗಳೂರು-ತುಮಕೂರು ಹೆದ್ದಾರಿಯಿಂದ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ಸುಲಭವಾಗಿ ಆಗಮಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು 2 ಹಂತದಲ್ಲಿ ಯಶವಂತಪುರ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ.
ರೈಲು ನಿಲ್ದಾಣದ ಮುಖ್ಯ ಕಟ್ಟಡದ ಚಾವಣಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾವಣಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.
ಸುಮಾರು 200 ಮೀಟರ್ ಉದ್ದದ ಚಾವಣಿ ಇದಾಗಿದೆ. ನಿಲ್ದಾಣದ ಆವರಣದಲ್ಲಿ ಬಸ್ ಬೇ ನಿರ್ಮಾಣವಾಗಿದ್ದು, ಬಿಎಂಟಿಸಿ ಬಸ್‌ಗಳು ನೇರವಾಗಿ ಟರ್ಮಿನಲ್ ಬಳಿಗೆ ಬರಲಿದೆ. ಇದರಿಂದ ಪ್ರಯಾಣಿಕರು ಕೆಲವೇ ನಿಮಿಷಗಳಲ್ಲಿ ನಿಲ್ದಾಣ ಪ್ರವೇಶಿಸಿ, ರೈಲು ಹಿಡಿಯಲು ಅನುಕೂಲವಾಗಲಿದೆ. ಯಶವಂತಪುರ ಮೆಟ್ರೋ ರೈಲು ನಿಲ್ದಾಣದ ಸಂಪರ್ಕವೂ ಸುಲಭವಾಗಲಿದೆ.
ಕೆಎಸ್‌ಆರ್ ರೈಲು ನಿಲ್ದಾಣದ ಬಳಿಕ ನಗರದ ಎರಡನೇ ಅತಿದೊಡ್ಡ ರೈಲು ನಿಲ್ದಾಣವಾಗಿರುವ ಯಶವಂತಪುರ ರೈಲು ನಿಲ್ದಾಣದಲ್ಲಿ ಆರು ಪ್ಲಾಟ್ ಫಾರ್ಮ್‌ಗಳಿವೆ. ಸದಾ ಪ್ರಯಾಣಿಕರ ಹಾಗೂ ರೈಲು ಸಂಚಾರ ದಟ್ಟಣೆಯಿಂದ ಕೂಡಿದೆ.
ಈ ನೂತನ ಟರ್ಮಿನಲ್ ಏಳು ಪ್ಲಾಟ್ ಫಾರ್ಮ್ ಹೊಂದಿದೆ. ಇದರಿಂದ ಕೆಎಸ್‌ಆರ್ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದಲ್ಲಿನ ರೈಲು ಹಾಗೂ ಪ್ರಯಾಣಿಕರ ಒತ್ತಡ ಸಮಸ್ಯೆ ಕಡಿಮೆಯಾಗಲಿದೆ.
ಎಸ್‌ಡಬ್ಲ್ಯೂಆರ್‌ನ ಡೆಪ್ಯೂಟಿ ಮ್ಯಾನೇಜರ್ ವಿಜಯಾ ಮಾತನಾಡಿ, ”ದಾವಣಗೆರೆ, ಧಾರವಾಡ ಹಾಗೂ ಮೈಸೂರು ನಿಲ್ದಾಣಗಳನ್ನು ಕೂಡ ಸುಂದರಗೊಳಿಸುವ ಕಾರ್ಯ ನಡೆಯುತ್ತಿದೆ. ಮೈಸೂರು ನಿಲ್ದಾಣ ಕೆಲಸ ಮುಗಿದಿದೆ, ಇತರೆ ನಿಲ್ದಾಣಗಳಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ” ಎಂದರು.
ಈ ಎರಡೂ ರೈಲು ನಿಲ್ದಾಣಗಳಿಂದ ದೂರದ ಊರುಗಳಿಗೆ ಸಂಚರಿಸುವ ಸುಮಾರು 60ಕ್ಕೂ ಅಧಿಕ ರೈಲುಗಳನ್ನು ಬೈಯಪ್ಪನಹಳ್ಳಿಗೆ ಟರ್ಮಿನಲ್‌ಗೆ ಸ್ಥಳಾಂತರಿಸಲು ನೈಋುತ್ಯ ರೈಲ್ವೆ ತೀರ್ಮಾನಿಸಿದೆ.