‘ಪುಕ್ಸಟ್ಟೆ ಲೈಫು’ ಪ್ರೀಮಿಯರ್‌ನಲ್ಲಿ ನೆನಪಾದ ಸಂಚಾರಿ ವಿಜಯ್
ದಿವಂಗತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನದ ನಂತರ ಅವರ ನಟನೆಯ ಒಂದೊಂದೆ ಚಿತ್ರಗಳು ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ ಲೂಸ್ ಮಾದ ಯೋಗೇಶ್ ನಟನೆಯ ‘ಲಂಕೆ’ ಚಿತ್ರ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಸಂಚಾರಿ ವಿಜಯ್ ನಾಯಕನಟನಾಗಿ ನಟಿಸಿರುವ ‘ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಚಿತ್ರ ಸೆಪ್ಟೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅರವಿಂದ್ ಕುಪ್ಳೀಕರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನಾ ನಟಿಸಿದ್ದಾರೆ.
ಸ್ವತಃ ವಿಜಯ್ ಅವರೇ ಕಥೆ ನೀಡಿದ್ದು, ಸಿನಿಮಾದಲ್ಲಿ ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನಾಗಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡು ನಟಿಸಿದ್ದರಂತೆ. ಈಗಾಗಲೇ ಈ ಸಿನಿಮಾವನ್ನು ಕಿಚ್ಚ ಸುದೀಪ್ ವೀಕ್ಷಿಸಿದ್ದು, ಸಂಚಾರಿ ನಟನೆಯ ಬಗ್ಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರಂತೆ.
‘ಪುಕ್ಸಟ್ಟೆ ಲೈಫು’ ಸಿನಿಮಾದ ಟ್ರೈಲರ್ ಹಾಗೂ ಪ್ರಮೋಷನಲ್ ವಿಡಿಯೋ ಜನರ ಗಮನ ಸೆಳೆದಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಹಲವು ಮೈಸೂರಿನಲ್ಲಿ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿದೆ. ಬುಧವಾರ ಸಂಜೆ ‘ಪುಕ್ಸಟ್ಟೆ ಲೈಫು’ ಸಿನಿಮಾದ ಪ್ರೀಮಿಯರ್ ಶೋ ಏರ್ಪಡಿಸಿದ್ದು, ಒಂದು ಸೀಟು ಸಂಚಾರಿ ವಿಜಯ್‌ಗಾಗಿ ಮೀಸಲಿಡಲಾಗಿತ್ತು.