ದೇಶ

ದೇಶದಲ್ಲೇ 3 ಕೈಗಾರಿಕಾ ಕಾರಿಡಾರ್ ಹೊಂದಿದ ಏಕೈಕ ರಾಜ್ಯ ಕರ್ನಾಟಕ

ಬೆಂಗಳೂರು, ಸೆಪ್ಟೆಂಬರ್ 23- ಕರ್ನಾಟಕವು ಜಾಗತಿಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿದ್ದು, ದೇಶದಲ್ಲೇ ಮೂರು ಕೈಗಾರಿಕಾ ‌ಕಾರಿಡಾರ್ ಗಳನ್ನು ‌ಹೊಂದಿದ ಏಕೈಕ ರಾಜ್ಯವಾಗಿದೆ ಎಂದು ‌ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಪ್ರಶಂಸಿದ್ದಾರೆ.

ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕೆಐಎಡಿಬಿ ಆಯೋಜಿಸಿದ್ದ ಭಾರತದ 75 ನೇ ಸ್ವಾತಂತ್ರ್ಯವದ ಸವಿನೆನಪಿಗಾಗಿ ಸಪ್ತಾಹದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹೂಡಿಕೆ ಮಾಡುವ ಜಾಗತಿಕಉದ್ಯಮಿಗಳಿಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ ತಾಣವಾಗಿದೆ. ಏಕೆಂದರೆ ನಾವು ಇಲ್ಲಿಗೆ ಬರುವ ಉದ್ಯಮಿಗಳಿಗೆ ಅತ್ಯುತ್ತಮವಾದ ಹಾಗೂ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದು ಇಲ್ಲಿರುವ ಅವಕಾಶಗಳನ್ನು ತೆರೆದಿಟ್ಟರು.

“ಭಾರತದ ಮೂರು ಮಹಾನಗರಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸುವ ಮೂರು ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳನ್ನು ಹೊಂದಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (CBIC), ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ (BMEC) ಮತ್ತು ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ (HBIC) ಗಳನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್ (NICDC) ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.

ಕೈಗಾರಿಕಾ ವಲಯದಲ್ಲಿ ರಾಜ್ಯವು ಸಾಧಿಸಿರುವ ಪ್ರಗತಿಯನ್ನು ವಿವರಿಸಿದ ಅವರು, ಆಡಳಿತ ನಡೆಸಿರುವ ಸರ್ಕಾರಗಳು ದೇಶದಲ್ಲೇ ಕರ್ನಾಟಕವನ್ನು ನಂ .1 ಸ್ಥಾನಕ್ಕೆ ‌ಕೊಂಡುಯ್ಯದು ಹೂಡಿಕೆದಾರ ಸ್ನೇಹಿ ರಾಜ್ಯವನ್ನಾಗಿ ಮಾಡಲು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಕರ್ನಾಟಕವು ಪ್ರಮುಖ ಉದ್ಯಮಗಳಿಗೆ ಆದ್ಯತೆಯ ತಾಣವಾಗಿ ಮಾರ್ಪಟ್ಟಿದೆ. ಏಕೆಂದರೆ ಇದು ವೆಚ್ಚದ ಸ್ಪರ್ಧಾತ್ಮಕ ಉತ್ಪಾದನಾ ವಾತಾವರಣವನ್ನು ಒದಗಿಸುತ್ತದೆ. ಕಳೆದ ದಶಕದಲ್ಲಿ 7.09 % ಜಿಎಸ್ ಡಿಪಿ ಯೊಂದಿಗೆ ಕರ್ನಾಟಕವು ಭಾರತದ 4 ನೇ ಅತಿದೊಡ್ಡ ಆರ್ಥಿಕತೆಯ ರಾಜ್ಯವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಶಂಸಿದರು.

2020- 21 ನೇ ಸಾಲಿನ ಮೊದಲ ‌ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲೇ ‘ವಿದೇಶಿ ನೇರ ಬಂಡವಾಳ ಹೂಡಿಕೆ’ ಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿ ಇನ್ನಷ್ಟು ದೊಡ್ಡ ‌ದೊಡ್ಡ ಉದ್ಯಮಿಗಳು ಹೂಡಿಕೆ ಮಾಡಲು ಮುಂದೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ತಲಾ ಆದಾಯವು 5 ನೇ ಸ್ಥಾನದಲ್ಲಿದೆ. 31 ಜಿಲ್ಲೆಗಳನ್ನು ಒಳಗೊಂಡಿರುವ ಜನಸಂಖ್ಯೆಯ ಪ್ರಕಾರ ಇದು 8 ನೇ ಅತಿದೊಡ್ಡ ರಾಜ್ಯವಾಗಿದೆ, ಇದು ಕೇಂದ್ರೀಕೃತ ಹೂಡಿಕೆಗೆ ಆಯ್ಕೆಗಳನ್ನು ನೀಡುತ್ತದೆ.

ಕಳೆದ 50 ವರ್ಷಗಳಲ್ಲಿ ಕರ್ನಾಟಕವು ಭಾರತದ ಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ. 400 ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ನೆಲೆಯಾಗಿದೆ. “ಇದು ನಮಗೆ 75 ವರ್ಷಗಳ ಹೆಮ್ಮೆಯ ಪ್ರಯಾಣವಾಗಿದೆ” ಎಂದು ಹೇಳಿದರು.

ಜಾಗತಿಕ ಫಾರ್ಚೂನ್ 500 ಕಂಪನಿಗಳನ್ನು ಒಳಗೊಂಡಂತೆ ಕರ್ನಾಟಕವನ್ನು ತಮ್ಮ ಪ್ರಮುಖ ಹೂಡಿಕೆ ಪ್ರದೇಶವಾಗಿ ಬೆಂಗಳೂರಿನ ಸುತ್ತ ಕೇಂದ್ರೀಕರಿಸಿ ವಿಶ್ವದ 4 ನೇ ಅತಿದೊಡ್ಡ ಟೆಕ್ನಾಲಜಿ ಕ್ಲಸ್ಟರ್ ಆಗಿ ಮಾಡಿವೆ. ರಾಜ್ಯದಲ್ಲಿ ಅತ್ಯಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲು‌ ಇದು‌ ಕಾರಣೀಭೂತವಾಗಿದೆ ಎಂದು ವಿವರಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರವನ್ನು
ವಿವರಿಸಿದ ಸಚಿವ ನಿರಾಣಿ ಅವರು, ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ರಾಜ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಕಳೆದ 75 ವರ್ಷಗಳಲ್ಲಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯದ ಕೊಡುಗೆ ಅನುಕರಣೀಯವಾಗಿದೆ. ಕರ್ನಾಟಕವು ಯಾವಾಗಲೂ ಪ್ರವರ್ತಕ ರಾಜ್ಯವಾಗಿದೆ” ಎಂದು ಹೇಳಿದರು.

ಭೂ ಸುಧಾರಣೆಗಳು, ಪಂಚಾಯತ್ ರಾಜ್ ಸುಧಾರಣೆಗಳು, ಕೈಗಾರಿಕಾ ನೀತಿಗಳು, ನಾವೀನ್ಯತೆ ಮತ್ತು ವಿವಿಧ ಸಾರ್ವಜನಿಕ ನೀತಿಗಳು ಜ್ಞಾನ ಮತ್ತು ಕೌಶಲ್ಯ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆಗೆ ಬಾಗಿಲು ತೆರೆದಿದೆ ಎನ್ನುವ ‌ಮೂಲಕ ಹೂಡಿಕೆದಾರರನ್ನು ರಾಜ್ಯಕ್ಕೆ ನಿರಾಣಿ‌ ಅವರು ಆಹ್ವಾನ ‌ಕೊಟ್ಟರು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ರಮಣರೆಡ್ಡಿ,ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀ ಡಾ.ಎನ್. ಶಿವಶಂಕರ್, ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button