ಅರ್ಚಕರ ಮೇಲೆ ದುಷ್ಕರ್ಮಿಗಳ ದಾಳಿ: ಚಿನ್ನ, ಹಣ, ಮೊಬೈಲ್ ಕದ್ದು ಪರಾರಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೆಣ್ಣೂರು ಅಂಡರ್ ಪಾಸ್ ಬಳಿ ನಡೆದಿದೆ.
ಈ ಘಟನೆ ಸೆ.20ರಂದು ನಡೆದಿದ್ದು, ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅರ್ಚಕ ಮಣಿಕಂಠ ಶರ್ಮಾ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರ್ಚಕರು ಮಾಜಿ ಸಚಿವ ಆರ್. ಶಂಕರ್ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮುಗಿಸಿಕೊಂಡು ರಾತ್ರಿ 10:30ರ ಸಮಯದಲ್ಲಿ ಮನೆಗೆ ತೆರಳುತ್ತಿದ್ದಾಗ ಹೆಣ್ಣೂರು ಅಂಡರ್ ಪಾಸ್ ಬಳಿ ಅರ್ಚಕರ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದೆ. ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದರೂ ಬಿಡದ ದುಷ್ಕರ್ಮಿಗಳು ಮಚ್ಚು, ಲಾಂಗ್ ಗಳಿಂದ ದಾಳಿ ನಡೆಸಿದ್ದಾರೆ. ಅರ್ಚಕರ ಬಳಿ ಇದ್ದ 60ಗ್ರಾಂ ಚಿನ್ನದ ಸರ, 20 ಸಾವಿರ ನಗದು, ಮೊಬೈಲ್ ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಆರ್ ಶಂಕರ್ ಅವರು ಅರ್ಚಕರ ಮೇಲಿನ ಹಲ್ಲೆ ಖಂಡಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.