ಸಿಕ್ಸರ್ಗಳ ಸುರಿಮಳೆ! ವೇಗದ ಶತಕ ಬಾರಿಸಿ ಐತಿಹಾಸಿಕ ದಾಖಲೆ ಬರೆದ ಪ್ರಿಯಾಂಶ್ ಆರ್ಯ | Priyansh Arya

ಚಂಡೀಗಢ : ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್ಕೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್, ಅಬ್ಬರದ ಬ್ಯಾಟಿಂಗ್ ನಡೆಸಿತು. 20 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 219 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಇನ್ನು ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯುವ ಆಟಗಾರ ಪ್ರಿಯಾಂಶ್ ಆರ್ಯ ಐಪಿಎಲ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್ನಲ್ಲಿ ಅನ್ಕ್ಯಾಪ್ಡ್ ಪ್ಲೇಯರ್ ಪಟ್ಟಿಯಲ್ಲಿ ವೇಗದ ಶತಕವನ್ನು ದಾಖಲಿಸಿದ 24 ವರ್ಷದ ಪ್ರಿಯಾಂಶ್ ಆರ್ಯ, ಇಂದಿನ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದರು ಎಂಬುದರಲ್ಲಿ ಅನುಮಾನವೇ ಇಲ್ಲ. ಕೇವಲ 42 ಎಸೆತದಲ್ಲಿ 103 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದ ಪುಟದಲ್ಲಿ ಪ್ರಿಯಾಂಶ್ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
13 ನೇ ಓವರ್ನ ಐದನೇ ಎಸೆತದಲ್ಲಿ ಮತೀಶಾ ಪತಿರಾನ ಅವರ ಬೌಲಿಂಗ್ಗೆ ಬೌಂಡರಿ ಬಾರಿಸುವ ಮೂಲಕ ಪ್ರಿಯಾಂಶ್ ಶತಕ ಗಳಿಸಿದರು. ತಮ್ಮ ಮೊದಲ ಐಪಿಎಲ್ ಶತಕ ಬಾರಿಸಿದ ಆರ್ಯ, ಬರೋಬ್ಬರಿ ಏಳು ಬೌಂಡರಿ ಮತ್ತು 9 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತಂಡ ಐದು ವಿಕೆಟ್ಗಳನ್ನು ಕಳೆದುಕೊಂಡು ಪರದಾಡುತ್ತಿದ್ದಾಗಲೂ ತಂಡದ ಜವಾಬ್ದಾರಿಯನ್ನು ತಾನೊಬ್ಬನೇ ಹೊತ್ತ ಪ್ರಿಯಾಂಶ್, ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದರು.
ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿದೆ. ಈ ಬೃಹತ್ ಗುರಿಯನ್ನು ಸಿಎಸ್ಕೆ ತಲುಪಲಿದೆಯೇ? ಇಂದಿನ ಪಂದ್ಯದಲ್ಲಿ ಆದರೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪಂಜಾಬ್ ಬ್ಯಾಟಿಂಗ್ ವಿವರ
ಪ್ರಿಯಾಂಶ್ ಆರ್ಯ- 103 ರನ್ 42 ಎಸೆತ
ಶಶಾಂಕ್ ಸಿಂಗ್- 52* ರನ್, 36 ಎಸೆತ
ಮಾರ್ಕೋ ಜೆನ್ಸನ್- 34* ರನ್, 19 ಎಸೆತ
ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು