ಕ್ರೀಡೆ

PBKS vs LSG: ರಿಷಬ್ ಪಂತ್ ಪಡೆಗೆ ತವರಿನಲ್ಲೇ ಮುಖಭಂಗ; ಪಂಜಾಬ್‌ ಕಿಂಗ್ಸ್‌ಗೆ ಭರ್ಜರಿ ಗೆಲುವು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ರಿಷಬ್ ಪಂತ್‌ ಪಡೆಗೆ ತವರಿನಲ್ಲೇ ಮುಖಭಂಗವಾಗಿದ್ದು ಪಂಜಾಬ್ ಕಿಂಗ್ಸ್ ಎರಡನೇ ಪಂದ್ಯವನ್ನೂ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‍ ಜೈಂಟ್ಸ್ ಪಂಜಾಬ್ ಕಿಂಗ್ಸ್ ಬಿಗಿ ಬೌಲಿಂಗ್ ದಾಳಿಯೆದುರು ರನ್ ಗಳಿಸಲು ಪರದಾಡಿತು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

ಮಿಚೆಲ್ ಮಾರ್ಷ್ ಮೊದಲನೇ ಎಸೆತದಲ್ಲೇ ಔಟಾಗಿದ್ದು ತಂಡಕ್ಕೆ ದೊಡ್ಡ ಆಘಾತವಾಯಿತು. ಏಡೆನ್ ಮಾರ್ಕ್ರಮ್ 18 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರೆ, ನಿಕೋಲಸ್ ಪೂರನ್ 30 ಎಸೆತಗಳಲ್ಲಿ 44 ರನ್ ಗಳಿಸಿದರು. ನಾಯಕ ರಿಷಬ್ ಪಂತ್ ಮೂರನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು. 5 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾದರು.

ಆಯುಷ್ ಬದೋನಿ 41 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ 19 ರನ್ ಗಳಿಸಿದರು. ಅಬ್ದುಲ್ ಸಮದ್ 12 ಎಸೆತಗಳಲ್ಲಿ 27 ರನ್ ಗಳಿಸುವ ಮೂಲಕ ಕೊನೆಯಲ್ಲಿ ತಂಡದ ಸ್ಕೋರ್ 170 ರ ಗಡಿದಾಟಲು ಕಾರಣವಾದರು. ಪಂಜಾಬ್‌ ಕಿಂಗ್ಸ್‌ನ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು ಮಿಂಚಿದರು. ಲೋಕಿ ಫರ್ಗ್ಯುಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಯಾನ್ಸೆನ್ ಹಾಗೂ ಯುಜ್ವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದರು.

ಶ್ರೇಯಸ್, ಪ್ರಭ್‌ಸಿಮ್ರನ್, ವಧೇರಾ ಅಬ್ಬರ

172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲಿ ಪ್ರಿಯಾಂಶ್ ಆರ್ಯ (8 ರನ್) ಅವರ ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕ ಜೊತೆಯಾದ ಪ್ರಭ್‌ಸಿಮ್ರನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಎರಡನೇ ವಿಕೆಟ್‌ಗೆ 84 ರನ್ ಕಲೆಹಾಕುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು. ಪ್ರಭ್‌ಸಿಮ್ರನ್ ಸಿಂಗ್ 34 ಎಸೆತಗಳಲ್ಲಿ 9 ಬೌಂಡರಿ 3 ಭರ್ಜರಿ ಸಿಕ್ಸರ್ ಸಹಿತ 69 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 30 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 52 ರನ್ ಗಳಿಸಿದರು. ನೇಹಲ್ ವಧೇರಾ 25 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 43 ರನ್ ಗಳಿಸಿದರು.

ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button