ಮಂಗಳೂರು: ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು (Bengaluru) ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 (National Highway 75) ರ ಚತುಷ್ಪಥ ಕಾಮಗಾರಿ ಮತ್ತೆ ಆರಂಭಗೊಂಡಿದೆ. 2017 ರಲ್ಲೇ ಈ ಹೆದ್ದಾರಿಯ ಅಗಲೀಕರಣ ಕಾಮಗಾರಿಯನ್ನು ಆರಂಭಿಸಲಾಗಿತ್ತಾದರೂ, ಬಳಿಕ ಕೆಲವು ತಾಂತ್ರಿಕ ಕಾರಣದಿಂದಾಗಿ ಕಾಮಗಾರಿಯನ್ನು ವಹಿಸಿಕೊಂಡಿದ್ದ ಕಂಪನಿ ಅರ್ಧದಲ್ಲೇ ಕಾಮಗಾರಿ ನಿಲ್ಲಿಸಿತ್ತು. ಇದೀಗ ಮತ್ತೆ ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗಿನ ಸುಮಾರು 65 ಕಿಲೋಮೀಟರ್ ರಸ್ತೆಯ ಚತುಷ್ಪಥ ಕಾಮಗಾರಿ ಆರಂಭಗೊಂಡಿದ್ದು, 2023 ರ ಕೊನೆಗೆ ಈ ಕಾಮಗಾರಿ ಮುಕ್ತಾಯಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
821 ಕೋಟಿ ರೂಪಾಯಿಯ ಕಾಮಗಾರಿ
ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೆ ಚಾಲನೆ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿ.ಸಿ. ರೋಡ್ ನಿಂದ ಅಡ್ಡಹೊಳೆವರೆಗಿನ 65 ಕಿಲೋಮೀಟರ್ ವ್ಯಾಪ್ತಿಯ ಹೆದ್ದಾರಿಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಯೋಜನೆ ಹಾಕಿಕೊಂಡಿತ್ತು. ಈ ಸಂಬಂಧ 2017 ರಲ್ಲಿ L & T ಕಂಪನಿಗೆ 821 ಕೋಟಿ ರೂಪಾಯಿಯ ಕಾಮಗಾರಿಯನ್ನೂ ಒಪ್ಪಿಸಲಾಗಿತ್ತು.
ಇದರಲ್ಲಿ ರಸ್ತೆ ನಿರ್ಮಾಣದ ಜೊತೆಗೆ 14.5 ಕಿಲೋಮೀಟರ್ ಸರ್ವೀಸ್ ರಸ್ತೆ, ಎರಡು ಫೈ ಓವರ್, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್ ಪಾಸ್ ಹಾಗೂ ಟಾಲ್ ಪ್ಲಾಝಾವನ್ನು ಒಳಗೊಂಡಿದೆ. ಕಾಮಗಾರಿಯನ್ನು ಅತ್ಯಂತ ವೇಗವಾಗಿ ಆರಂಭಿಸಿದ್ದ ಕಂಪನಿಗೆ 45 ಮೀಟರ್ ರಸ್ತೆಯನ್ನು ಅಗಲೀಕರಣಗೊಳಿಸಲು ಹಲವು ತೊಡಕುಗಳು ಎದುರಾಗಿತ್ತು.