ಅಸಾದುದ್ದೀನ್ ಒವೈಸಿ ಮನೆಗೆ ನುಗ್ಗಿ ದಾಂಧಲೆ, ಧ್ವಂಸ; ಹಿಂದೂ ಸೇನಾದ ಐವರ ಬಂಧನ
ನವದೆಹಲಿ: ದೆಹಲಿಯ ಅಶೋಕ ರಸ್ತೆ ಸಮೀಪದ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿ, ಕೆಲವು ವಸ್ತುಗಳನ್ನು ಧ್ವಂಸಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸೇನಾದ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, ಕೋಮು ಘೋಷಣೆಗಳನ್ನು ಕೂಗುತ್ತಾ, ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿರುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ಸಂಸದರ ಮನೆಯೇ ಸುರಕ್ಷಿತವಲ್ಲ ಎಂದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವ ಸಂದೇಶವನ್ನು ರವಾನಿಸುತ್ತೀರಿ ಎಂದು ಶಾ ಅವರ ಟ್ವೀಟ್ ಗೆ ಟ್ಯಾಗ್ ಮಾಡಿ ಒವೈಸಿ ಪ್ರಶ್ನಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಿಂದೂ ಸೇನಾ ಸಂಘಟನೆಯ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ನವ ದೆಹಲಿ ಡೆಪ್ಯುಟಿ ಕಮಿಷನರ್ ದೀಪಕ್ ಯಾದವ್ ತಿಳಿಸಿದ್ದಾರೆ. ಅಲ್ಲದೇ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.